ವಿಧಾನಸಭಾ ಚುನಾವಣೆಯಲ್ಲಿ ತನ್ನೆಲ್ಲಾ ಲೆಕ್ಕಾಚಾರ ಬುಡಮೇಲಾಗಿ ಕೊನೆಗೆ ಪ್ರಧಾನ ವಿರೋಧ ಪಕ್ಷದ ಸ್ಥಾನವನ್ನು ಕಳೆದುಕೊಂಡ ಬಿಜೆಪಿ ಸೋಲಿನ ಬಗ್ಗೆ ಪರಾಮರ್ಶೆ ನಡೆಸುವುದಕ್ಕೂ ಹೆಚ್ಚಾಗಿ ಯಡಿಯೂರಪ್ಪ ಅವರನ್ನು ಕರೆತಂದರೆ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಕೈಗೂಡುವ ಲಾಭದ ಬಗ್ಗೆಯೇ ಪರಾಮರ್ಶೆ ನಡೆಸುತ್ತಿರುವುದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಬಿಜೆಪಿಯಿಂದ ಸಿಡಿದೆದ್ದು ಕೆಜೆಪಿ ಸ್ಥಾಪಿಸಲು ಸ್ವತಃ ಯಡಿಯೂರಪ್ಪ ಅವರು ಮಾಡಿಕೊಂಡ ತಪ್ಪುಗಳೇ ಕಾರಣ ಅಥವಾ ಬಿಜೆಪಿಯಲ್ಲಿ ಯಡಿಯೂರಪ್ಪ ವಿರುದ್ಧ ನಡೆದ ಷಡ್ಯಂತರದಿಂದ ಬಿಜೆಪಿ ಬಿಡಲು ಸಹಾಯ ಮಾಡಿರುವ ಬಗ್ಗೆ ಚರ್ಚೆ ನಡೆಸುವ ಕಾಲ ಮಿಂಚಿಹೋಗಿದೆ.
ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು ಚುನಾವಣೆಗೂ ಮುನ್ನ ನಡೆದ ಕೆಲ ರಾಜಕೀಯ ಬೆಳವಣಿಗೆಗಳಿಂದಾದ ಒಟ್ಟು ಪರಿಣಾಮ. ಒಂದು ರೀತಿಯಲ್ಲಿ ಬಿಜೆಪಿ ಹಾಗೂ ಯಡಿಯೂರಪ್ಪ ಒಬ್ಬರ ವಿರುದ್ಧ ಒಬ್ಬರು ಪ್ರತೀಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಇಬ್ಬರೂ ಹಾಳಾಗಿದ್ದು ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ. ಪ್ರತಿಷ್ಟೆಯನ್ನೇನೋ ಪಣಕಿಟ್ಟು ಹೋರಾಟ ನಡೆಸಿ ಸೋಲೇ ಅಂತಿಮ ಫಲಿತಾಂಶ ಎಂದು ಮನದಟ್ಟು ಮಾಡಿಕೊಂಡಿರುವ ಇಬ್ಬರೂ, ಆಗಿರುವ ತಪ್ಪುಗಳ ಪರಾಮರ್ಶೆಯಲ್ಲಿ ತೊಡಿದ್ದಾರೆ.
(ಬಿಜೆಪಿಯನ್ನು ಸೋಲಿಸಿದೆ ಅಥವಾ ಬಿಜೆಪಿಗೆ ಬಿಎಸ್ ವೈ ಅನಿವಾರ್ಯ ಎಂಬುದನ್ನು ಸಾಬೀತು ಪಡಿಸಿದೆ ಎಂದು ಬೀಗುತ್ತಿರುವುದು ಮೇಲ್ನೋಟಕ್ಕೆ ಕಾಣುತಿದ್ದರೂ ಒಳಗೆ ಬಿಜೆಪಿ ಸೇರುವ ಕೊನೆಯ ಅವಕಾಶವನ್ನು ತಳ್ಳಿಹಾಕುವ ಮನಸ್ಥಿತಿಯಲ್ಲಿ ಯಡಿಯೂರಪ್ಪ ಅವರಿಲ್ಲ)
ಬಹುಶಃ ಅದಕ್ಕೆ ಇರಬೇಕು ಚುನಾವಣೆ ಫಲಿತಾಂಶ ಮುಗಿದ ಬಳಿಕ ಬಿಜೆಪಿ ರಾಜ್ಯ ನಾಯಕರಿಗೆ ಯಡಿಯೂರಪ್ಪ ಅವರ ಬಗ್ಗೆ ಅರಿವಾಗಿದೆ ಆದರೆ ರಾಷ್ಟ್ರೀಯ ನಾಯಕರು ಈ ವಿಷಯವನ್ನು ಇನ್ನಾದರೂ ಅರ್ಥಮಾಡಿಕೊಳ್ಳಲಿ ಎಂದು ಯಡಿಯೂರಪ್ಪ ಖಾಸ ಬೆಂಬಲಿಗರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು. ಅಂದರೆ ರಾಜ್ಯ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಅನುಪಸ್ಥಿತಿಯ ಮಹತ್ವ ಏನು ಎಂಬುದು ಅರಿವಾಗಿದೆ ಅದನ್ನೇ ರಾಷ್ಟ್ರೀಯ ನಾಯಕರೂ ಅರ್ಥಮಾಡಿಕೊಂಡು ಯಡಿಯೂರಪ್ಪ ಅವರಿಗೆ ನೇರವಾಗಿ ಬಿಜೆಪಿಗೆ ಬರಲು ಆಹ್ವಾನ ನೀಡಲಿ ಎಂಬ ಮಾತಿನ ಗೂಢಾರ್ಥ ಇದ್ದಿರಬೇಕು.. ಇಷ್ಟೆಲ್ಲಾ ಆದರೂ ಯಡಿಯೂರಪ್ಪ ಅವರು ಈ ಜನ್ಮದಲ್ಲೇ ಬಿಜೆಪಿಗೆ ಬರುವುದಿಲ್ಲ ಎಂದು ಖಂಡತುಂಡವಾಗಿ ಹೇಳಿಬಿಟ್ಟರು. ಅಲ್ಲಿಗೆ ಈ ವಿಷಯದಲ್ಲಿ ಸ್ವಲ್ಪ ದಿನಗಳ ಕಾಲ ಮೌನ.
ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ಹಾಳಾಗಲು ಕಾರಣವಾದ ಅವರ ಆಪ್ತರೂ ವಾಪಸ್ಸಾಗುವುದು: ಈ ವಿಷಯಕ್ಕೆ ಬಿಜೆಪಿ ಸರ್ಕಾರದ ಆರಂಭದ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಲೇಬೇಕಾಗುತ್ತದೆ.
ಆರಂಭದದಿನಗಳಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಈಗಿನ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಕಾರ್ಯಕ್ರಮಗಳಿಗಿಂತಲೂ( ಬಡತನ ನಿರ್ಮೂಲನೆಗೆ ಶಾಶ್ವತ ಪರಿಹಾರ ನೀಡುವ ಬದಲು ರಾಜ್ಯದಲ್ಲಿ ಸೋಮಾರಿಗಳನ್ನು ಹೆಚ್ಚು ಮಾಡಲು ಅಗ್ಗದ ದರದಲ್ಲಿ ಅಕ್ಕಿ ನೀಡುವ ಯೋಜನೆ)ಮುಂತಾದ ಯೋಜನೆಗಳಿಗಿಂತ ಉತ್ತಮ ಜನಪರ ಯೋಜನೆಗಳನ್ನು ನೀಡಿ ಅಭಿವೃದ್ಧಿ ಪರ ಆಡಳಿತದ ಭರವಸೆ ಮೂಡಿಸಿತ್ತು.
ಒಳ್ಳೆಯ ಕೆಲಸಗಳು ನಡೆದಾಗ ಹೆಗ್ಗಳಿಕೆ ಹೇಗೆ ನಾಯಕನಿಗೆ ಸಲ್ಲುತ್ತದೋ, ಕೆಟ್ಟದಾದಾಗಲೂ ಅದರ ಹೊಣೆಗಾರಿಕೆಯನ್ನು ಯಾವತ್ತೂ ನಾಯಕನೇ ಹೊರಬೇಕಾಗುತ್ತದೆ. ಬಿಜೆಪಿ ಬಿಎಸ್ ವೈ ಪಾಲಿಗೂ ಇದೇ ಅಗಿದ್ದು. ಯಡಿಯೂರಪ್ಪ ಉಪಮುಖ್ಯಮಂತ್ರಿಯಾದಾಗಿನಿಂದಲೂ ರಾಜ್ಯಕ್ಕೆ, ಜನರಿಗೆ ಒಳ್ಳೆಯದು ಮಾಡಬೇಕೆಂಬ ಪ್ರಾಮಾಣಿಕ ಕಳಕಳಿಯಿತ್ತು.
ಉಪಮುಖ್ಯಮಂತ್ರಿಯಾದಾಗ ಉತ್ತಮ ಹಾಗೂ ಪಾರದರ್ಶಿಕ ಆಡಳಿತ ನೀಡುವ ಉದ್ದೇಶದಿಂದ ಯಡಿಯೂರಪ್ಪನವರು ಹಾಗೂ ಶಾಸಕರು-ಸಂಸದರು-ಪಕ್ಷದ ಮಧ್ಯೆ ಪರಸ್ಪರ ಸಂಪರ್ಕ-ಸಮಾಲೋಚನೆಗೆ ಅವಕಾಶ ಕಲ್ಪಿಸಲು 'ಬ್ರೇಕ್ ಫಾಸ್ಟ್ ವಿಥ್ ಡಿಸಿಎಂ' ಎಂಬ ಕಾರ್ಯಕ್ರಮ ಜಾರಿಗೆ ತರಲಾಯಿತು. ಪ್ರತಿ ಜಿಲ್ಲೆಯ ಶಾಸಕರು, ಸಂಸದ ಹಾಗೂ ಪಕ್ಷದ ಸ್ಥಳೀಯ ನಾಯಕರು ಒಂದೊಂದು ದಿನ ಉಪಮುಖ್ಯಮಂತ್ರಿ ಜತೆ ಬೆಳಗಿನ ಉಪಾಹಾರಕ್ಕೆ ಸೇರಿದಾಗ ಅಭಿವೃದ್ಧಿ ಕೆಲಸಗಳಿಗೆ ಹಣಕಾಸು ಮಂಜೂರು ಪಡೆಯಲು, ಪಕ್ಷವನ್ನು ಹೇಗೆ ಬಲಪಡಿಸುವುದು ಎಂಬುದನ್ನು ಸಮಾಲೋಚಿಸಲು ಅವಕಾಶವಾಯಿತು.
ಇದರಿಂದ ಉಪಮುಖ್ಯಮಂತ್ರಿ ಹಾಗೂ ಶಾಸಕರು, ಕೆಳಹಂತದ ನಾಯಕರ ನಡುವೆ ಮಾಹಿತಿ ವಿನಿಮಯ ಹಾಗೂ ಅಭಿವೃದ್ಧಿ ಪಥದಲ್ಲಿ ಆಡಳಿತ ಸಾಗುವುದಕ್ಕೆ ಅನುಕೂಲಕರವಾದ ವಾತಾವರಣ ನಿರ್ಮಾಣವಾಯಿತು.ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೂ ಉತ್ತಮ ಹೆಸರು ಲಭ್ಯವಾಯಿತು. ಆದರೆ ಇದು ಯಡಿಯೂರಪ್ಪನವರ ಸುತ್ತ ಇದ್ದ ಭಟ್ಟಂಗಿಗಳಿಗೆ ಇದು ಅಪಥ್ಯವಾಯಿತು ಎಂದು ಕಾಣಿಸುತ್ತದೆ. ಮುಂದೆ ಬಿಜೆಪಿ ಸ್ವಂತ ಸರ್ಕಾರ ಸ್ಥಾಪನೆಯಾದಾಗ ಸುತ್ತ ಇದ್ದವರ ಧನದಾಹವನ್ನು ಕೊನೆಗಾಣಿಸದೇ ಅವರನ್ನು ಸಹಿಸಿಕೊಂಡರು ಯಡಿಯೂರಪ್ಪ.
ಮತ್ತೊಂದೆಡೆ ರೆಡ್ಡಿಗಳ ಉಪಟಳವನ್ನು ತಗ್ಗಿಸಲು 2 ನೇ ಹಂತದ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದೇ ಯಡಿಯೂರಪ್ಪ ಅವರಿಗೆ ಮುಳುವಾಯಿತು. ಯಡಿಯೂರಪ್ಪ ತಮ್ಮ ಸುತ್ತಲೂ ಗಿರ್ಕಿ ಹೊಡೆಯುತ್ತಿದ್ದ ಆಪ್ತ ಸಮಾಲೋಚನೆಯ ಪ್ರಭಾವವಾಗಿ ತಮ್ಮ ತಲೆ ಮೇಲೆ ತಾವೇ ಚಪ್ಪಡಿಕಲ್ಲು ಹಾಕಿಕೊಂಡರು. ಆದರೂ ಅವರ ಅವನತಿಗೆ ಕಾರಣವಾದ ರೇಣುಕಾಚಾರ್ಯ ಸೇರಿದಂತೆ ಹಲವರನ್ನು ಇಂದಿಗೂ ಹತ್ತಿರದಲ್ಲೇ ಇರಿಸಿಕೊಂಡಿದ್ದಾರೆ. ಇವರೆಲ್ಲರೂ ಮತ್ತೆ ಯಡಿಯೂರಪ್ಪ ಜೊತೆ ಬಂದರು ಎಂದರೆ ಯಡಿಯೂರಪ್ಪ ಆಗಮನದಿಂದ ಬಿಜೆಪಿಯಲ್ಲಿ ಮತ್ತೊಮ್ಮೆ ಆಂತರಿಕ ಕಲಹಕ್ಕೆ ಸಾಕಷ್ಟು ಸಾಧ್ಯತೆಗಳಿರುತ್ತವೆ. ಆದರೆ ಯಡಿಯೂರಪ್ಪ ಈಗ ತಮ್ಮೊಂದಿಗಿರುವ ಆಪ್ತರನ್ನು ಬಿಟ್ಟು ಬಿಜೆಪಿಗೆ ಬರುವ ಸಾಧ್ಯತೆಗಳು ತೀರಾ ಕಡಿಮೆ.
ಬಿಜೆಪಿಯೂ ಷರತ್ತು ವಿಧಿಸುತ್ತದೆ:
ಲೋಕಸಭಾ ಚುನಾವಣೆಯ ದೃಷ್ಠಿಯಿಂದ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರಬೇಕು ಎಂಬ ಧೋರಣೆ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ ಆದರೆ ಬಿಜೆಪಿ ಹಾಳಾಗಲು ಕಾರಣವಾಗಿ ಯಡಿಯೂರಪ್ಪ ಅವರೊಂದಿಗಿರುವ ಕೆಲವರನ್ನು ವಾಪಸ್ ಕರೆದುಕೊಂಡು ಬರುವುದರ ಪರಿಣಾಮದ ಬಗ್ಗೆ ಬಿಜೆಪಿ ಗಂಭೀರವಾಗಿ ಯೋಚಿಸಬೇಕಾಗುತ್ತದೆ.
ಈ ಬಗ್ಗೆ ಬಿಜೆಪಿ ಅವರು ಯೋಚಿಸಿದ್ದೇ ಆದಲ್ಲಿ ಅನವಶ್ಯಕವಾಗಿ ಅಪಾಯವನ್ನು ಮೈ ಮೇಲೆ ಎಳೆದುಕೊಳುವುದರ ಬದಲು ಬಿಜೆಪಿ ಹಾಗೂ ಬಿಎಸ್ ವೈ ಗೆ ಮುಳುವಾಗುವವರನ್ನು ಬಿಟ್ಟು ಬರಲು ಬಿಜೆಪಿ ಷರತ್ತು ವಿಧಿಸಬಹುದು. ಇದಕ್ಕೆ ಯಡಿಯೂರಪ್ಪ ಒಪ್ಪುವರೇ ಅಥವಾ ಬಿಜೆಪಿಯಲ್ಲಿಯೂ ತಮಗೆ ಅಪಥ್ಯವಾಗುವ ಕೆಲವರನ್ನು ದೂರವಿಡಲು ಷರತ್ತು ವಿಧಿಸುವರೆ ಎಂಬುದನ್ನು ಕಾದುನೋಡಬೇಕು.
ಇದೆಲ್ಲಾ ಗಮನಿಸಿದರೆ ಸ್ವಾಭಿಮಾನಿ ಯಡಿಯೂರಪ್ಪ ಈ ಷರತ್ತುಗಳನ್ನು ಒಪ್ಪಿಕೊಂಡು ಸಂಧಾನ ಸೂತ್ರ ನೂರಕ್ಕೆ ನೂರು ಯಶಸ್ವಿಯಾಗುವುದು ಬಹುಪಾಲು ಅನುಮಾನ ಎಂದೇ ಹೇಳಬೇಕಾಗುತ್ತದೆ. ಒಂದು ವೇಳೆ ಅದೃಷ್ಟವಶಾತ್ ರಾಜಕೀಯದಲ್ಲಿ ಏನೂ ನಡಿಯ ಬಹುದು ಎಂಬ ಮಾತನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಕೆಳಹಂತದಲ್ಲಿ(ಅಂದರೆ ರಾಜ್ಯ ಮಟ್ಟದಲ್ಲಿ) ಎಲ್ಲವೂ ಯಶಸ್ವಿಯಾದರೂ ರಾಷ್ಟ್ರೀಯ ನಾಯಕರ ಗಮನಕ್ಕೆ ಬಾರದೇ ಯಡಿಯೂರಪ್ಪ ಬಿಜೆಪಿಗೆ ಬರಲು ಸಾಧ್ಯವಿಲ್ಲ.
ಸದ್ಯದ ಸ್ಥಿತಿ ಗಮನಿಸಿದರೆ ಬಿಜೆಪಿಯಲ್ಲೇ ಕೆಲವರಿಗೆ ಯಡಿಯೂರಪ್ಪ ಮರಳುವುದು ಇಷ್ಟವಿಲ್ಲ ಈ ಅಭಿಪ್ರಾಯ ರಾಷ್ಟ್ರೀಯ ನಾಯಕರ ಮೇಲೂ ಸಾಕಷ್ಟು ಪ್ರಭಾವ ಬೀರಬಹುದು. ಎಂದಿಗೂ ಆಡ್ವಾಣಿಯೂ ಯಡಿಯೂರಪ್ಪ ಬಿಜೆಪಿ ಗೆ ವಾಪಸ್ಸಾಗುವುದಕ್ಕೆ ಹೆಚ್ಚು ಆಸಕ್ತಿ ತೋರಿದಂತಿಲ್ಲ. ಉಳಿದ ನಾಯಕರಿಗೆ ಯಡಿಯೂರಪ್ಪ ಅವರು ಬಿಜೆಪಿ ತೊರೆಯಬೇಕಾದರೆ ಇದ್ದ ಮನಸ್ಥಿತಿ ಇಗಲೂ ಇರುತ್ತದೆ ಎಂಬುದಕ್ಕೆ ಆಧಾರ ಇಲ್ಲ.
ಮೋದಿ ಪ್ರಧಾನಿ ಅಭ್ಯರ್ಥಿಯಾದರೆ ಯಡಿಯೂರಪ್ಪ ವಾಪಸ್ಸಾಗಲು ಸಾಧ್ಯತೆಗಳು ಹೆಚ್ಚು?: ಯಡಿಯೂರಪ್ಪ ಬಿಜೆಪಿ ಬಿಟ್ಟರೂ ಮೋದಿ ಬಗ್ಗೆ ಇರುವ ವಿಶ್ವಾಸ ಗೌರವ ಬಿಟ್ಟಿಲ್ಲ. ರಾಜ್ಯ ಬಿಜೆಪಿಯಲ್ಲಿ ಮೊಟ್ಟಮೊದಲಬಾರಿಗೆ ಬಿಕ್ಕಟ್ಟು ಎದುರಾದಾಗಲೂ ಬಿಜೆಪಿ ಹೈ ಕಮಾಂಡ್ ತಕ್ಷಣಕ್ಕೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೇ ಬಿಜೆಪಿಯ ಪತನಕ್ಕೆ ತಾನೇ ಕಾರಣವಾಯಿತು. ಇನ್ನು ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವುದರಲ್ಲಿಯೇ ಸಂಶಯ ತಿಕ್ಕಾಟಗಳು ಗೊಂದಲಗಳನ್ನು ಬಗೆಹರಿಸಿಕೊಳ್ಳಲು ರಾಷ್ಟ್ರೀಯ ನಾಯಕರಿಗೆ ಸಾಧ್ಯವಾಗದೇ ಅಕ್ಷರಶಃ ರಾಜಕೀಯ ಮಾಡುತ್ತಿದ್ದಾರೆ.
ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವುದರ ಬಗ್ಗೆ ಬಿಜೆಪಿಯಲ್ಲಿ ಸಾಕಷ್ಟು ಗೊಂದಲಗಳಿವೆ ಹೀಗಿರುವಾಗ ಯಡಿಯೂರಪ್ಪ ಬಗ್ಗೆ ವರಿಷ್ಠರು ಸಂಪೂರ್ಣ ಕಾಳಜಿ ವಹಿಸುವ ಸಾಧ್ಯತೆಗಳ ಬಗ್ಗೆ ಯೋಚಿಸಬೇಕು. ಅಲ್ಲದೇ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾವುದನ್ನು ನಂಬಿ ಯಡಿಯೂರಪ್ಪ ಬಿಜೆಪಿಗೆ ಬರುವ ಆತುರದ ನಿರ್ಧಾರ ಕೈಗೊಳ್ಳುವುದು ಕಷ್ಟ ಸಾಧ್ಯ.
ಒಂದು ವೇಳೆ ರಾಜ್ಯ ಕಾಂಗ್ರೆಸ್ ನಂತೆ ಕೇಂದ್ರದಲ್ಲಿಯೂ ಎನ್.ಡಿ.ಎ. ಗೆದ್ದ ನಂತರ ಮೋದಿಗೆ ಪ್ರಧಾನಿ ಗಾದಿ ನೀಡಿದಲ್ಲಿ ರಾಜ್ಯ ನಾಯಕರು ಮುಂದಿಟ್ಟಿದ್ದಾರೆ ಎಂದು ಹೇಳಲಾಗಿರುವ "ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆದುತರುವ" ಮೂಲ ಉದ್ದೇಶ( ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸೀಟುಗಳನ್ನು ಗೆಲ್ಲುವ ಉದ್ದೇಶ)ವೇ ಈಡೇರುವುದಿಲ್ಲ.
ಆ ನಂತರವೂ ಯಡಿಯೂರಪ್ಪ ಬಿಜೆಪಿ ಗೆ ಮರಳಿದರೆ ಅದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪರಿಣಾಮ ಬೀರಬಹುದು ಅಷ್ಟೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಬಿಎಸ್ ವೈ ನಡುವೆ ರಾತ್ರೋರಾತ್ರಿ ಮಹತ್ತರ ಬೆಳವಣಿಗೆ ನಡೆದು ಅಚ್ಚರಿ ಮೂಡಿಸುವ ಸಾಧ್ಯತೆಗಳು ಸಧ್ಯಕ್ಕೆ ಕಡಿಮೆಯಿದ್ದು ಬಿಟ್ಟು ಹೋದಷ್ಟೇ ಸುಲಭವಾಗಿ ವಾಪಸ್ ಬರಲು ಸಾಧ್ಯವಿಲ್ಲ.