ಮಂಥನ
ಭಾರತಕ್ಕಿರಲಿ ಸಂಸ್ಕೃತ ವಿಶ್ವವಿದ್ಯಾನಿಲಯ ಹೊನಲು!

ಇತ್ತೀಚೆಗೆ ಭಾರತದ ಜನಸಂಖ್ಯೆಗೆ ಅನುಗುಣವಾಗಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ದಿನದಿಂದ
ದಿನಕ್ಕೆ ಬೆಳೆಯುತ್ತಿದೆ, ಕೆಲವನ್ನು ಇಬ್ಬಾಗ ಮಾಡಲು ಯೋಜನೆ ಸಿದ್ದಗೊಂಡಿದೆ (ಉದಾಹರಣೆಗೆ ಇತ್ತೀಚೆಗಷ್ಟೇ ಬೆಂಗಳೂರು ವಿಶ್ವವಿದ್ಯಾನಿಲಯವನ್ನು ಇಬ್ಬಾಗ ಮಾಡಲು
ಹೊರಟಿರುವುದು). ಇದೇ ವೇಳೆ ಕೆಲವು ಅಲ್ಪ ಸಂಖ್ಯಾತ ವಿಶ್ವವಿದ್ಯಾನಿಲಯಗಳನ್ನು ಹೊಸದಾಗಿ ಸ್ಥಾಪಿಸಲು ಸಹ ಸರ್ಕಾರದ ರೂಪು ರೇಷೆ ಸಿದ್ದಪಡಿಸಿಕೊಂಡಿದೆ (ಮತೀಯ
ವಿಶ್ವವಿದ್ಯಾನಿಲಯ ಎಂದೂ ಹೇಳಬಹುದು).

ಸರಿ, ಪ್ರಸ್ತುತ ಇರುವ ವಿಶ್ವವಿದ್ಯಾಲಯಗಳನ್ನು ಆಡಳಿತಾತ್ಮಕ ದೃಷ್ಟಿಯಿಂದ ಇಬ್ಬಾಗಮಾಡುವುದಕ್ಕೆ ಬಹುಶ: ಯಾರದ್ದೂ ತಕರಾರು ಇರುವುದಿಲ್ಲ. ಆದರೆ, ಅದ್ಯಾವ ಕಾರಣದಿಂದಲೋ ನಮ್ಮ ದೇಶದಲ್ಲಿ ರಾಜಕಾರಣಕ್ಕೆ ಸೀಮಿತವಾಗಿದ್ದ ಈ ಅಲ್ಪ ಸಂಖ್ಯಾತ, ಬಹುಸಂಖ್ಯಾತ ಎಂಬ ಸಮಾಜ ಒಡೆಯುವ ಅನಾರೋಗ್ಯ ಪರಿಕಲ್ಪನೆಗಳು ನಿಧಾನವಾಗಿ ಎಲ್ಲಾ ಕ್ಷೇತ್ರಗಳಿಗೂ ಲಗ್ಗೆ ಇಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕೂ ಸಹ!.

ಹಾಗೆಯೇ, ಮತೀಯ ಆಧಾರದ ಮೇಲೆ ಅಲ್ಪ ಸಂಖ್ಯಾತರ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸುವುದರ ಬಗ್ಗೆ ವ್ಯಾಪಕ ವಿರೋಧ ಕೇಳಿಬರುತ್ತಿದ್ದು ಈ ಬಗ್ಗೆ ಚರ್ಚೆ, ವಿಮರ್ಶೆ
ನಡೆಸಬೇಕಾಗಿದೆ

ಸಹಜವಾಗಿ ಶಿಕ್ಷಣವನ್ನು ನಮ್ಮ ದೇಶದಲ್ಲಿ ಬೇಧ ಭಾವದಿಂದ ನೀಡುವುದಿಲ್ಲ. ಏಕೆಂದರೆ, ನಮ್ಮದು ವಿವಿಧತೆಯಲ್ಲಿ ಏಕತೆ ಅಥವಾ ನಾವೆಲ್ಲರೂ ಒಂದು ಎಂದು ನಂಬಿರುವ ಪ್ರಜಾಪ್ರಭುತ್ವ ರಾಷ್ಟ್ರ, ಅಂದಮೇಲೆ ನಾವು ಎಲ್ಲರನ್ನೂ ಸಮಾನವಾಗಿ ಕಾಣಬೇಕು, ಕಾಣುತ್ತಿದ್ದೇವೆ, ಕಾಣುತ್ತೇವೆ. ಆದ್ದರಿಂದ ಎಲ್ಲರಿಗೂ ಶಿಕ್ಷಣ ಹಾಗೂ ಸಮಾನತೆ
ದೊರೆತರೆ ನಮ್ಮ ರಾಷ್ಟ್ರ ಅಭಿವೃದ್ಧಿಯಾಗುವುದು. ಇಲ್ಲಿ ಎಲ್ಲರೂ ಒಂದು ಎಂಬ ಭಾವನೆಯಲ್ಲಿ ಬದುಕುತ್ತಿರಬೇಕಾದರೆ ಯಾವುದೋ ಒಂದು ವರ್ಗವನ್ನು ಅಲ್ಪಸಂಖ್ಯಾತರು ಮತ್ತೊಂದು ವರ್ಗದವರನ್ನು ಬಹುಸಂಖ್ಯಾತರು ಎಂಬ ಬಿರುದು ನೀಡುವುದು ಸರಿಯೆ? ಹಾಗೆಯೇ, ಈಗಾಗಲೇ ನಾವು, ಆಧುನಿಕತೆಗೆ ಸರಿ ಹೊಂದುವಂತೆ ಇಂಗ್ಲಿಷ್ ವ್ಯಾಮೋಹಕ್ಕೆ ಸಿಲುಕಿ ನಮ್ಮತನ, ನಮ್ಮ ಭಾಷೆಗಳನ್ನು ಮರೆಯುತ್ತಿದ್ದೇವೆ.

ನಮ್ಮತನಕ್ಕೆ ನಾವು ಗೌರವ ಕೊಡದಿದ್ದರೆ ಇನ್ನು ಮುಂದಿನ ಪೀಳಿಗೆಯವರಿಗೆ ಭಾಷೆ ಜೊತೆಗೆ ದೇಶದ ಸಂಸ್ಕೃತಿ ಕೂಡ ಮರೆತುಹೋಗಿ ಅದೊಂದು ಪಳೆಯುಳಿಕೆಯಾಗಿ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಲಿದೆ.

ಪ್ರಸ್ತುತ ದಿನಗಳಲ್ಲಿ ನಮ್ಮ ಸಂಸ್ಕೃತಿ ಅವನತಿಯ ಅಂಚಿನತ್ತ ಸಾಗುತ್ತಿದೆ. ಇನ್ನೂ ಸಹ ನಾವು ಎಚ್ಚೆತ್ತುಕೊಳ್ಳದೆ ವಿದೇಶದ ಸ್ವತ್ತುಗಳಿಗೆ ವ್ಯಾಮೋಹ ತೋರಿಸುತ್ತಿದ್ದರೆ
ಅನಾಹುತ ಖಂಡಿತ!

ಇಂಥಹ ಪರಿಸ್ತಿತಿಯಲ್ಲಿ ನಮ್ಮ ದೇಶದಲ್ಲಿ ವಾಸಿಸುವವರು ಯಾರೇ ಇರಲಿ ಯಾವ ಧರ್ಮದವರೇ ಆಗಿರಲಿ, ಅವರು ಒಗ್ಗಟ್ಟಾಗಿರಬೇಕು. ಹಾಗೆಯೇ ನಮ್ಮತನವನ್ನು ಖಂಡಿತವಾಗಿಯೂ ಇನ್ನು ಮುಂದೆಯಾದರೂ ರೂಢಿಸಿಕೊಂಡರೆ ಕನಿಷ್ಠ ನಮ್ಮನ್ನು ನಾವು ಯಾರ ಯಾಚನೆಯೂ ಇಲ್ಲದೆ ರಕ್ಷಿಸಿಕೊಳ್ಳಬಹುದು. ಅದನ್ನು ಬಿಟ್ಟು ರಾಜಕೀಯದ ವೋಟ್ ಬ್ಯಾಂಕಿಂದ ಹಿಡಿದು ವಿಶ್ವವಿದ್ಯಾನಿಲಯದ ವರೆಗೂ ಅಲ್ಪಸಂಖ್ಯಾತ ಬಹುಸಖ್ಯಾತ ಎಂಬ ಹೆಸರಿನಲ್ಲಿ ಹೊಡೆದಾಟ ಮಾಡಿಕೊಂಡರೆ ಮತ್ತೊಮ್ಮೆ ಇತಿಹಾಸ ಪುನರಾವರ್ತನೆ ಆಗುವುದಕ್ಕೆ ಅವಕಾಶ ನೀಡಿದಂತಾಗುತ್ತದೆ.

ಅದೆ, ಸ್ವಾತಂತ್ರ ಪೂರ್ವದಲ್ಲಿ ನಮ್ಮ ನಾಯಕರು ನಮ್ಮನ್ನು ಪೋಷಿಸುತ್ತಿದ್ದ ಕೆಲ ರಾಜರು ತಮ್ಮ ಸ್ವಾರ್ಥಕ್ಕಾಗಿ ಹೊರದೇಶದಿಂದ ಬಂದ ಮತಾಂಧರ ಜೊತೆ ಕೈಜೋಡಿಸಿ ನಮ್ಮ ದೇಶವನ್ನು ಕೊಳ್ಳೆಹೊಡೆಯಲು ಸಹಾಯ ಮಾಡಿದರಲ್ಲ ಹಾಗೆ.

ಇಂದಿಗೂ ಅಂದಿಗೂ ವ್ಯತ್ಯಾಸವೆಂದರೆ ಅಂದು ತಮ್ಮ ಸ್ವಾರ್ಥಕ್ಕಾಗಿ ಹೊರ ದೇಶದಿಂದ ಬಂದವರ ಜೊತೆ ಕೈಜೋಡಿಸಿ ನಮ್ಮನ್ನು ಆಳುವವರು ಅಲ್ಪಸಂಖ್ಯಾತ ಬಹುಸಂಖ್ಯಾತ ಎಂಬ ಪೊಳ್ಳುವಾದ ಸೃಷ್ಠಿಸಿ ದೇಶದ ದುಸ್ತಿತಿಗೆ ಕಾರಣರಾದರು, ಇಂದು ನಮ್ಮ ನಾಯಕರು ಅದನ್ನೇ ಉಪಯೋಗಿಸಿಕೊಂಡು ತಮ್ಮ ಸ್ವಾರ್ಥ ಸಾಧನೆ ಮಾಡುತ್ತಿದ್ದಾರೆ.

ನಮಗೆ ಸ್ವಾಂತಂತ್ರ ಬಂದಾಗ ಪಾಕಿಸ್ತಾನವನ್ನು ಧರ್ಮದ ಆಧಾರದ ಮೇಲೆ ಒಂದು ಪ್ರತ್ಯೇಕ ರಾಷ್ಟ್ರವಾಗಿ ಮಾಡಲಾಯಿತು. ಈ ಸಂದರ್ಭದಲ್ಲಿ ಧರ್ಮದ ಆಧಾರದ ಮೇಲೆ ತಮ್ಮ ರಾಷ್ಟ್ರವನ್ನು ಆರಿಸಿಕೊಳ್ಳುವ ಸಂಪೂರ್ಣ ಹಕ್ಕು ಎರಡೂ ದೇಶದ ಪ್ರತಿಯೊಬ್ಬ ಪ್ರಜೆಗೂ ಇತ್ತು. ಅಂತೆಯೇ, ಕೆಲವರು ಧರ್ಮದ ಆಧಾರದ ಮೇಲೆ ಪಾಕಿಸ್ತಾನವನ್ನು ಆರಿಸಿಕೊಂಡರು, ಇನ್ನೂ ಕೆಲವರು ಸಂಪೂರ್ಣ ಸಮ್ಮತಿಯಿಂದ ಭಾರತ ನಮ್ಮ ದೇಶ, ನಾವು ಭಾರತೀಯರು ಎಂದು ತಮ್ಮ ನಿಷ್ಠೆಯನ್ನು ಹಿಂದೂಸ್ಥಾನಕ್ಕೆ ತೋರಿದರು.

ಇರಲಿ. ಈ ಎರಡು ವರ್ಗಗಳ ಪೈಕಿ ಭಾರತವೇ ನಮ್ಮ ರಾಷ್ಟ್ರ ಎಂದು ಸಂಪೂರ್ಣ ಒಪ್ಪಿ ಇಲ್ಲೇ ಉಳಿದ ಮೇಲೆ ಅವರು ಯಾವ ಹೇಗೆ ಅಲ್ಪಸಂಖ್ಯಾತರು?. ತಮ್ಮ ದೇಶದಲ್ಲಿ ತಾವೇ
ಅಲ್ಪಸಂಖ್ಯಾತರು ಎಂಬುದು ಅರ್ಥಹೀನವಲ್ಲವೆ?. ಆದರೆ ಇಂದಿಗೂ ಸಹ ಕೆಲ ಕಿಡಿಗೇಡಿಗಳಿಂದ ಅಲ್ಪಸಂಖ್ಯಾತ ಬಹುಸಂಖ್ಯಾತ ಎಂಬ ಅಂಕಿಗಳಲ್ಲೇ ಹಿಂದೂಸ್ಥಾನದ ಅಸ್ತಿತ್ವವನ್ನು ನಾಶ ಮಾಡುವ ಪ್ರಯತ್ನ ನಡೆದಿದೆ.

ಇಂದು ನಾವು ನಮ್ಮ ಸಂಸ್ಕೃತಿ, ಸನಾತನ ಧರ್ಮವನ್ನು ಮರೆಯಲು ಇದೇ ಪೊಳ್ಳುವಾದ ಕಾರಣ ಎಂದರೆ ತಪ್ಪಾಗಲಾರದು. ಹೋಗಲಿ, ಪ್ರತಿ ಚುನಾವಣೆ ವೇಳೆಯೂ ಅಲ್ಪಸಂಖ್ಯಾತರ ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾ ಬೊಬ್ಬೆಇಡುವ ರಾಜಕಾರಣಿಗಳು ಕಳೆದ 60ವರ್ಷಗಳಿಂದ ಅವರ ಶ್ರೇಯೋಭಿವೃದ್ಧಿ ಮಾಡಿದ್ದಾರೆ.......? ಕೇವಲ ವಿಶ್ವವಿದ್ಯಾನಿಲಯ ಸ್ಥಾಪಿಸುವುದರಿಂದ ಯಾವುದೋ ಒಂದು ವರ್ಗಕ್ಕೆ ಸಹಕಾರಿಯಾಗಲಿದೆ, ಅಥವಾ ಅಲ್ಪಸಂಖ್ಯಾತರು ಅಭಿವೃದ್ಧಿಹೊಂದುತ್ತಾರೆ ಎನ್ನುವುದಾರೆ ದೇಶದ ಮೂಲೆ ಮೂಲೆಗಳಲ್ಲೂ ಅಲ್ಪಸಂಖ್ಯಾತ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಬೇಕಾಗುತ್ತದೆ.

ಪಾಕಿಸ್ತಾನ ನಮ್ಮದು ಮುಸ್ಲಿಂ ರಾಷ್ಟ್ರ, ಕುರಾನ್ ನಮ್ಮ ಪವಿತ್ರ ಗ್ರಂಥ ಎಂದು ಹೇಳಿಕೊಳ್ಳುತ್ತೆ. ಅಲ್ಲಿ ಪ್ರಜಾಪ್ರಭುತ್ವವೇ ಅಸ್ತಿತ್ವದಲ್ಲಿದೆ. ಅಮೇರಿಕಾ ನಮ್ಮದು ಕ್ರಿಶ್ಚಿಯನ್ ರಾಷ್ಟ್ರ, ಬೈಬೆಲ್ ಪವಿತ್ರ ಗ್ರಂಥ ಎಂದು ಹೇಳಿಕೊಳ್ಳುತ್ತದೆ, ಅಲ್ಲಿಯೂ ಪ್ರಜಾಪ್ರಭುತ್ವವೇ ಅಸ್ತಿತ್ವದಲ್ಲಿರುವುದು; ಆದರೆ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದ್ದರೂ, ಭಾರತ, ತಾನೊಂದು ಹಿಂದೂ ರಾಷ್ಟ್ರ, ಭಗವದ್ಗೀತೆ, ರಾಮಾಯಣ,ಮಹಾಭಾರತ ತನ್ನ ಪವಿತ್ರ ಗ್ರಂಥ ಎಂದು ಹೇಳಿಕೊಳ್ಳುವುದು ಅಪರಾಧ ಎಂಬಂತೆ ಬಿಂಬಿಸಲಾಗುತ್ತಿದೆ. ಪರಿಸ್ತಿತಿ ಹೀಗೆ ಮುಂದುವರೆದರೆ ಭಾರತವನ್ನು ಯಾವ ರಾಷ್ಟ್ರ ಎಂದು ಗುರುತಿಸಬೇಕು? ಇದನ್ನು ಸಹಿಸಿಕೊಂಡಿರುವ ಪರಿಣಾಮವೇ ಇಂದು ಕಾಶ್ಮೀರ ಪಂಜಾಬ್ ಪ್ರಾಂತ್ಯಗಳ ಮೇಲೆ ಕಣ್ಣಿಟ್ಟಿರುವ ಪಾಕಿಸ್ತಾನ ನಮ್ಮ ಮೇಲೆ ದಾಳಿ ನಡೆಸುವುದನ್ನು ಗಮನಿಸಿಯೂ ಈ ಅಲ್ಪಸಂಖ್ಯಾತ ಬಹುಸಂಖ್ಯಾತ ಎಂಬುದಕ್ಕೆ ಕಟ್ಟುಬಿದ್ದು ಮೌನಕ್ಕೆ
ಶರಣಾಗಬೇಕಾದ ಪರಿಸ್ಥಿತಿ ಬಂದೊದಗಿರುವುದು.

ಅದಿರಲಿ, ದೇಶದ ಸಾಧನೆಗೆ ವಿಶ್ವವಿದ್ಯಾನಿಲಯಗಳು ಕೈಗನ್ನಡಿ ಎನ್ನುತ್ತಾರೆ. ನಮ್ಮ ದೇಶದ ಭವಿಷ್ಯಕ್ಕೆ ಯಾವುದೇ ರೀತಿಯಲ್ಲೂ ಉಪಯೋಗವಾಗದಂಥಹ ಈ ಅಲ್ಪಸಂಖ್ಯಾತ ಮತೀಯ ಪರಿಕಲ್ಪನೆ ಆಧಾರದ ಮೇಲೆ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ಬದಲಿಗೆ ಮೂಲ ಹಿಂದೂಸ್ಥಾನ ನಿರ್ಮಾಣಕ್ಕೆ ಸಹಕಾರಿಯಾಗಿದ್ದ "ನಳಂದ" ಮಾದರಿಯ ಸಂಸ್ಕೃತ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿ ಅಲ್ಪಸಂಖ್ಯಾತ ಬಹುಸಂಖ್ಯಾತ ಎಂಬ ಭೇಧವಿಲ್ಲದೆ ವಿದ್ಯಾರ್ಜನೆಗೆ ಅವಕಾಶ ನೀಡಿ ಶಕ್ತಿ ಶಾಲಿ, ಸ್ವಾಭಿಮಾನಿ ಭಾರತ ದೇಶದ ನಿರ್ಮಾಣ ಮಾಡಬಹುದು ಅಲ್ಲವೆ?. ಆಗ ಯಾರು ತಾನೆ ನಮ್ಮ ದೇಶದ ಬಗ್ಗೆ ಹಗುರವಾಗಿ ನಡೆದುಕೊಳ್ಳುತ್ತಾರೆ?

ಅಂದಹಾಗೆ ಇಂದು ನಾವು ಹೊಂದಿರುವುದಕ್ಕಿಂತಲೂ ಹೆಚ್ಚಿನ ಸಂಸ್ಕೃತ ವಿಶ್ವವಿದ್ಯಾನಿಲಯಗಳನ್ನು ಜರ್ಮನಿ ದೇಶ ಹೊಂದಿದೆ. ವಿದೇಶದವರು ನಮ್ಮ ಮೂಲ ಭಾಷೆಯನ್ನು ಇಷ್ಟು ಗೌರವಿಸಬೇಕಾದರೆ, ನಾವು ಅದನ್ನು ಕನಿಷ್ಠ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಅದರಲ್ಲಿರುವ ವಿಷಯಗಳನ್ನು ತಪ್ಪು ಗ್ರಹಿಸಿ ಒಬ್ಬರಿಗೊಬ್ಬರು ಬಡಿದಾಡಿಕೊಂಡು ನಮ್ಮ ಪೂರ್ವಜರು ಬಳುವಳಿಯಾಗಿ ಕೊಟ್ಟ ಅಮೂಲ್ಯ ಜ್ನಾನ ಭಂಡಾರದಿಂದ ಪಡೆಯಬಹುದಾದ ಎಷ್ಟೋ ಪ್ರಯೋಜನಗಳಿಂದ ವಂಚಿತರಾಗುತ್ತಿದ್ದೇವೆ. ಅದನ್ನು ಸರಿಯಾಗಿ ಅರ್ಥೈಸಿಕೊಂಡು ನಮ್ಮ ಸನಾತನ ಧರ್ಮವನ್ನು ಅಲ್ಲಗಳೆಯುವುದನ್ನು ಬಿಟ್ಟರೆ ನಮ್ಮ ದೇಶ ಕನಿಷ್ಠ ಭಾರತವಾಗಿ ಉಳಿಯುತ್ತದೆ. ಅಲ್ಪಸಂಖ್ಯಾತ ಬಹುಸಂಖ್ಯಾತ ವಿವಿ ಬದಲು ಭಾರತಕ್ಕಿರಲಿ ಸಂಸ್ಕೃತ ವಿವಿ!

 


Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Srinivas Rao

Recent Posts

Date :20-08-2014
Date :06-05-2014
Date :17-02-2014
Date :12-01-2014
Date :14-11-2013
Date :30-10-2013
Date :25-09-2013
Date :15-08-2013
Date :29-06-2013
Date :06-06-2013

Copyright © 2011 - 2013 Rishi Systems P. Limited. All rights reserved.